ಕೇರಳ ಕೌಮುದಿ

ಕೇರಳದ ಪ್ರಮುಖ ಮಲಯಾಳಂ ದಿನಪತ್ರಿಕೆಗಳಲ್ಲೊಂದು. 1911ರಲ್ಲಿ ವಾರಪತ್ರಿಕೆಯಾಗಿ ಆರಂಭವಾಯಿತು. ದಿವಂಗತ ಸಿ.ವಿ. ಕುಂಜುರಾಮನ್ ಇದರ ಸ್ಥಾಪಕ-ಸಂಪಾದಕ. ಕುಂಜುರಾಮನ್ ಪುತ್ರ ಕೆ. ಸುಕುಮಾರನ್ ಸಂಪಾದಕತ್ವ ವಹಿಸಿಕೊಂಡ ಮೇಲೆ 1940ರಲ್ಲಿ ಇದು ದಿನಪತ್ರಿಕೆಯಾಗಿ ಪರಿವರ್ತನೆಗೊಂಡಿತು. ಈಗಿನ ಸಂಪಾದಕರು ಎಂ ಎಸ್ ಮಣಿ. ಆಗ ಇದರ ಪ್ರಸಾರ 1,000. ಅಂದಿನಿಂದ ಏಕಪ್ರಕಾರವಾಗಿ ಬೆಳೆಯುತ್ತ ಬಂದು ಈಗ ಆ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಕಳೆದ ಮೂರು ದಶಕಗಳಲ್ಲಿ ಕೇರಳರಾಜ್ಯದ ಸಾಮಾಜಿಕ, ಸಾಂಸ್ಕøತಿಕ ಹಾಗೂ ಸಾಹಿತ್ಯಕ ಪ್ರಗತಿಯಲ್ಲಿ ಇದು ವಹಿಸಿರುವ ಪಾತ್ರ ಗಮನಾರ್ಹವಾದ್ದು.

	ಪತ್ರಿಕೆ ಯಾವ ರಾಜಕೀಯ ಪೂರ್ವಾಗ್ರಹಗಳಿಗೂ ತುತ್ತಾಗದೆ ಸ್ವತಂತ್ರ ಧೋರಣೆಯನ್ನು ಪಾಲಿಸಿಕೊಂಡು ಬರುತ್ತಿದೆ. ವಸ್ತುನಿಷ್ಠೆ, ಹಿತಮಿತ ವಿಮರ್ಶೆ-ಇವು ಪತ್ರಿಕೆಯ ಲಕ್ಷಣಗಳು. ಹಳೆಯ ತಿರುವಾಂಕೂರು ಪ್ರದೇಶದಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ರಾಜ್ಯದ ಇತರ ಕಡೆಗಳಲ್ಲೂ ಇದರ ಪ್ರಸಾರ ವಿಸ್ತರಿಸುತ್ತಿದೆ.

	ಪತ್ರಿಕೆ ಪ್ರಕಟವಾಗುತ್ತಿರುವುದು ತಿರುವನಂತಪುರದಿಂದ. ಪ್ರಮುಖ ಸಮಾಚಾರ ಸಂಸ್ಥೆಗಳಿಂದ ಸುದ್ದಿ ತರಿಸುವುದರ ಜೊತೆಗೆ ಒಳನಾಡಿನಲ್ಲಿ ಸ್ವಂತ ಬಾತ್ಮಿದಾರರನ್ನು ನೇಮಿಸಿಕೊಂಡು, ಸುದ್ದಿ ವಿತರಣೆಯಲ್ಲಿ ಆದಷ್ಟು ಮುಂದಿರಲು ಇತರ ಪತ್ರಿಕೆಗಳೊಂದಿಗೆ ಇದು ಸ್ಫರ್ಧಿಸುತ್ತಿದೆ.
											 	(ಕೆ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ